Sunday, October 26, 2008

ಆಕಸ್ಮಿಕವಾಗಿ ಎದುರಾದ ಮಾನವೀಯ............


ಅದು ಪ್ರತಿದಿನದ ಬದುಕು. ಎಲ್ಲಿಂದಲೋ ಬಂದವರು ನಾವುಗಳು ಒಂದು ನೆಲೆ ಅಂತಾ ನಿಂತಿದ್ದೇವೆ. ನಮ್ಮ ಮನೆ ಒಂದು ಮೂಲೆ, ಕಾರ್ಯ ನಿರ್ವಹಿಸೋದು ಇನ್ನೆಲ್ಲೋ. ಹೀಗೆ , ದಿನದ ಜಂಟಾಟದ ನಡುವೆ ಬಸ್ಸೇರಿ ಕಛೇರಿಯೆಡೆಗೆ ಮುಖ ಮಾಡಿದ್ದೆ. ನಿಜವಾಗೂ ಅವತ್ತು ರಸ್ತೆ ಖಾಲಿ ಖಾಲಿ. ನೋಡು ನೋಡುತಿದ್ದಂತೆ ಬಸ್ಸು ತನ್ನ ವೇಗ ಪಡೆದುಕೊಂಡಿತ್ತು. ಭಾನುವಾರ. ಮುಂದಿದ್ದ ದೀಪಗಳ ಹಬ್ಬಕ್ಕೆ ಒಂಥರಾ ನೀರವ ಮೌನ.

ಓಡುತಿದ್ದ ಬಸ್ಸು ಕ್ರಮೇಣ ಬುಸುಗುಡುತಿತ್ತು. ಕಣ್ಣು ಹಾಗೇ ಹದವಾದ ನಿದ್ದೆಗೆ ಜಾರುತಿತ್ತು. ಪಕ್ಕದಲ್ಲಿದಿದ್ದ ಗೆಳಯ ರಫಿ ಎಫ್ ಎಂ ನ ಹಾಡಿಗೆ ತಲೆದೂಗುತಿದ್ದ. ಒಂದರ ನಂತರ ಒಂದರಂತೆ ಎದುರಾದ ನಿಲ್ದಾಣ ದಾಟಿ ಬಸ್ಸು ತಿರುವಿನಲ್ಲಿ ಹೊರಳಿದ್ದೇ ತಡ, ಬಸ್ಸು ಧಿಡೀರನೇ ಬ್ರೇಕ್ ಹಾಕಿತು. ನಿದ್ರಾ ದೇವತೆ ಆವರಿಸಿದ್ದ ನನಗೆ ಎದುರಿದ್ದ ಚಿತ್ರಣ ಅಸ್ಪಷ್ಟವಾಗಿತ್ತು.

ನಿಜವಾಗೂ ಜೀವ ಇಷ್ಟು ಅಗ್ಗವಾ ಅನ್ನಿಸಿದ್ದು ಆವಾಗಲೇ. ಪಟಾಕಿ ತರುವುದಾಗಿ ಹೇಳಿ ಹೊರನಡೆದ ತಂದೆ. ಹಬ್ಬದೂಟಕ್ಕೆ ದಿನಸಿ ತರುವ ಭರವಸೆ ನೀಡಿದ ಗಂಡ, ಜವಾಬ್ದಾರಿಯುತ ಮಗ, ಅಷ್ಟೇ ಅಲ್ಲಾ ಅಣ್ಣ, ತಮ್ಮ ಹೀಗೆ ಎದುರಿದ್ದ ಮನುಷ್ಯನಿಗೆ ಅದೆಷ್ಟೋ ಜವಾಬ್ದಾರಿಯ ಪಾತ್ರಗಳು. ತಲೆಗೆ ತೂಗು ಹಾಕಿದ ಹೆಲ್ಮಟ್ ನೆಲಕ್ಕುರುಳಿದೆ. ಪಕ್ಕದಲ್ಲೇ ಕಡು ಗೆಂಪು ಬಣ್ಣದ ಸಿಂಚನ. ಕಾಲಿಗೆ ತೊಟ್ಟಿದ್ದ ಬಾಟಾ ಚಪ್ಪಲಿ ಮಾರು ದೂರಕ್ಕೆ ಸರಿದೆವೆ. ಕನ್ನಡಕ ತನ್ನ ಆಕಾರಕಳಿದುಕೊಂಡು ಅಂಗಾತ ಮಲಗಿದೆ.

ಎದುರಿಂದ ಬಂದ ಕಾರಿಗೆ ಆಯ ತಪ್ಪಿ ಬೈ ಸವಾರ ನೇರವಾಗಿ ಡಿಕ್ಕಿಹೊಡೆದಿದ್ದಾನೆ. ಅಷ್ಟೇ, ಪರಿಣಾಮ ರಸ್ತೆ ಡಿವೈಡರ್ ನೆತ್ತಿ ಸೀಳಿದೆ. ಇಲ್ಲೊಂದು ವಿಷಯ ಪ್ರಸ್ತಾಪಿಸಲೇಬೇಕು. ಈ ನಮ್ಮ ಬೆಂಗಳೂರಿನ ಆಟೋ ಡ್ರೈವರ್ ಗಳನ್ನ ಅದೆಷ್ಟೇ ಜನ ಬೈಕೋಬಹುದು. ಇಲ್ಲ ಕಣ್ರೀ ಅವರಿಗೂ ಮಾನವೀಯತೆ ಇದೆ. ಈ ಅಪಘಾತ ಪ್ರಕರಣದ ನಿಜವಾದ ಹೀರೋಗಳೇ ಆಟೋ ಚಾಲಕರು.

ನಿಯಂತ್ರಣ ತಪ್ಪೋ, ಮೈಮರೆತೋ ಅಥವಾ ಆಕಸ್ಮಿಕವಾಗೋ ನಡೆದ ಈ ಘಟನೆಯಲ್ಲಿ ಅದೆಲ್ಲಿದ್ರೋ, ಬಂದೋರೇ, ಪೂರ್ವಾಪರ ವಿಚಾರಿಸದೇ, ವ್ಯಕ್ತಿಯ ಬಗುಲಿಗೆ ಕೈಹಾಕಿದೋರೇ ಆಟೋ ಏರಿಸಿ ಆಸ್ಪತ್ರೆಗೆ ಹೊಡಿ. ಅಲ್ಲಿಗೆ ಒಂದು ಚಿತ್ರಣ ಅಂತ್ಯವಾಗುತ್ತೆ.

ನೋಡುತ್ತ ನಿಂತ ನಮ್ಮೆಲ್ಲರನ್ನ ಉದ್ದೇಶಿಸಿ ಆಟೋ ಚಾಲಕನೊಬ್ಬ ಒಂದೇ ಮಾತು. ನೋಡ್ತಾ ನಿಲ್ಲೋಕೆ ಇದು ಸಿನಿಮಾ ಅಲ್ಲಾ, ಸ್ವಲ್ಪ ಯಾಮಾರಿದ್ರೆ ಜೀವ ಗಡಿ ದಾಟುತ್ತೆ. ನಿಜಕ್ಕೂ ಸತ್ಯ ಕಣಯ್ಯಾ. ಯಾರಿಗೂ ರಕ್ತದ ಮಡುವು ದಾಟಿ ಆತನ ಕೈಹಿಡಿದು ನೆರವಾಗೋ ಮನಸು ಬರಲಿಲ್ಲ. ಆದ್ರೆ, ಆಟೋ ಅಂತಾ ಕರೆಯಿಸಿಕೊಳ್ಳೋ ಈ ಜನಗಳ ಸಾಮಾಜಿಕ ಕಳಕಳಿ ಹೆಮ್ಮೆತರುತಿತ್ತು.

ಬದುಕಿನ ಬಂಡಿ ಒಂದಿಷ್ಟು ಆಯ ತಪ್ಪದ್ರೆ. ಇಲ್ಲಿ ಯಾರೂ ಇಲ್ಲ ಅಂದುಕೊಂಡು ಮನೆ ಬಿಡುವ ಜನಗಳ ಪಾಲಿಗೆ ಆಟೋದವರು ಇದ್ದಾರೆ. ಒಂದಲ್ಲಾ ಎರಡಲ್ಲಾ ಹತ್ತಾರು ಆಟೋಗಳು ಜಮಾಯಿಸಿ ಆ ಅನಾಮಿಕನೊಬ್ಬನ ನೆರವಿಗೆ ಬಂದದ್ದು, ಅದ್ಭುತ.

ದಾರಿಯಲ್ಲಿ ರಕ್ತಕಾರಿ ಸಾವಿನ ಕದ ತಟ್ಟಿದ ವ್ಯಕ್ತಿ ಇದೀಗ ಅದ್ಯಾವುದೋ ಆಸ್ಪತ್ರೆಯ ಮಂಚದ ಮೇಲೆ ಹಾಗೇ ಒರಗಿರಬಹುದು. ಮನಸ್ಸಿನ ಕಂದಕದಿಂದ ಒಂದೇ ಮಾತು, ಬದುಕಿದೆನಲ್ಲಾ.....

ಇದಕ್ಕೆಲ್ಲಾ ಆಟೋ ಜನಗಳೇ ಕಾರಣ......

ಬರುತ್ತೇನೆ.....

ಮತ್ತೆ ನೆನಪಿನಂಗಳದಿಂದ

ಪ್ರತೀಕ್ ಕೊಟ್ರೇಶ್................

No comments: