Wednesday, October 22, 2008

ಜೇನು ಜೇನಿನ ಹನಿಮಾತು.......

ಏಕೋ ಎಲ್ಲರೂ ಬೇಸರಗೊಂಡಿದ್ರು. ಮನಸು ಹೊಸದನ್ನು ಬಯಸುತಿತ್ತು. ಆಫೀಸಿನ ಮೊಗಸಾಲೆಯಲ್ಲಿ ಕಾಲ ಕಳೆದು ಕಳೆದು ಹಾಳಾದ್ದ್ ಏಸಿ ಉಸಿರು ಬಿಗಿಗೊಳಿಸಿ ಮೈ,ಕೈ ಎಲ್ಲವನ್ನೂ ಒಮ್ಮೆ ಮರಗಟ್ಟಿಸ್ತವೆ. ಇಂಥ ವಾತಾವರಣದಲ್ಲಿದ್ದೋ, ಅಥವಾ ನಮಗೆ ನಾವೆ ಕಡಿವಾಣ ಹಾಕಿಕೊಂಡೋ ಗೊತ್ತಿಲ್ಲ ಎಲ್ಲವೂ ಮರೆತಂತಾಗಿತ್ತು. ಇವತ್ತು ಒಮ್ಮೆಲೇ ನಮ್ಮ ಕಛೇರಿಯ ಕ್ಯಾಂಟೀನ್ ನಮ್ಮೆಲ್ಲರ ಮನದ ಮೊಗದಲ್ಲಿ ನಗುವಿನ ಗೆರೆ ಎಳೆದಿತ್ತು.
ಹಾಯಾಗ್ ಕುಳಿತು ಹರಟಿ, ಒಂದಿಷ್ಟು ಗೆಳೆಯರನ್ನು ಚೇಡಿಸಿ, ಕಿಚಾಯಿಸಿ ಎಲ್ಲರೂ ನಗುವಿನ ಕಡಲಲ್ಲಿ ಮಿಂದು ಎದ್ದೆವು. ಗುತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲರೂ ಒಂದು ಗೊತ್ತಾದ ಪರಿಧಿಯಲ್ಲಿ ಬಂಧಿಯಾಗಿದಿವೀ ಅನ್ನಿಸ್ತಿದೆ. ಪ್ರತಿ ದಿನ ಸುದ್ದಿ ಒಡಲಲ್ಲಿ ಜೀವಿಸಿ ನಮ್ಮ ವಯುಕ್ತಿಕ ಬದುಕಿನ ಒಂದಿಷ್ಟು ಚಹರೆಯೇ ಬದಲಾಗಿಬಿಟ್ಟಿದೆ.
ಅದು ಕಾಲೇಜು ದಿನಗಳು, ಇಳಿ ವಯಸ್ಸಿನ ಮುದುಕನೊಬ್ಬ ನಸುಕಿಗೆ ಎದ್ದು, ಹೊಟ್ಟೆ ತುಂಬಿಸಲು ಛಲ ತೊಟ್ಟವರಂತೆ ಓಡಿ ಬರ್ತಿದ್ದ. ನಮ್ಮಜ್ಜನ ಕಾಲದ ಸೈಕಲ್ ಏರಿ, ಅದರ ಪೆಡಲ್ ಮೇಲೆ ತನ್ನ ಜೀವ ಕಳೆದು ಕೊಂಡ ಕಾಲು ಹಾಕುತ್ತ ನಮಗಾಗಿ ಬರ್ತಿದ್ದ. ತುಂಬು ೭೦ ಜೀವವದು. ಮಕ್ಕಳು ಮೊಮ್ಮಕ್ಕಳು ಹೀಗೆ ಕಾಲದೂಡೋ ಕಾಲಘಟ್ಟದಲ್ಲಿ ಎಲ್ಲಿಂದಲೋ ಬಂದು ನಾಲ್ಕಕ್ಷರ ಕಲಿವ ನಮ್ಮಂಥವರ ಹಸಿವ ನೀಗಿಸುತಿದ್ದ.
ನಿಜ. ಕಣ್ಣಲ್ಲಿ ಕಣ್ಣಿಟ್ಟು ಆತನನ್ನು ಒಮ್ಮೆ ನೋಡಿದ್ರೆ, ಜೀವ ಮರುಗುತಿತ್ತು. ನಾವೆಲ್ಲಾ ಅಸಾಯಕರು. ಮನೆಯಿಂದ ತಿಂಗಳಂತ್ಯಕ್ಕೆ ಬರುತಿದ್ದ ಚೂರು ಪಾರು ಕಾಸನ್ನೇ ಗುಡ್ಡೆ ಹಾಕಿ ದಿನ ದೂಡುತಿದ್ದೋರು ನಾವು. ನೆರವಿನ ಹಸ್ತ ನೀಡಬೇಕೆಂದ್ರೂ ಅಲ್ಲಿ ಅದು ಅಸಾಧ್ಯವಾಗಿತ್ತು.
ಇದೀಗ, ಅನ್ನದಾತನ ಮುಖದಲ್ಲಿ ಸುಕ್ಕುಗಟ್ಟಿದ ಗೆರೆಗಳು ಕಣ್ಣಿಗೆ ರಾರಾಜಿಸುತ್ತಿವೆ. ದುಡ್ಡಿಗೇ ಮಾಡಿದ್ರೂ ಅದರಲ್ಲಿ ಗೊತ್ತಿಲ್ಲದಂಥ ಒಂದು ಅವ್ಯಕ್ತ ಪ್ರೀತಿ ಇತ್ತು. ಅದ್ಭುತ ಅಲ್ಲದಿದ್ರೂ ತಿಂದ ಅನ್ನ ದೇವರಾಣೆ ಹೊಟ್ಟೆಗೆ ಹತ್ತುತಿತ್ತು. ಅಜ್ಜನ ಕ್ಯಾಂಟೀನಿನ ಹೊರಾಂಗಣದಲ್ಲಿ ಹರಟುತ್ತಿದ್ದ ನಮಗೆ ಗಡಿಯಾರ ಯಾಕಾದ್ರೂ ಇದೆ ಅನ್ನಿಸ್ತಿತ್ತು.
ಅದೊಂದು ಅಪರೂಪದ ಪ್ರಪಂಚ. ಗೆಳೆಯರ ಬಳಗ ಕಟ್ಟಿ ದಾಳಿಗಿಳಿದ್ರೆ, ಅಜ್ಜನಂಗಡಿಯ ಗಿರುಮಿಟ್ಟು ಧ್ವಂಸವಾಗ್ತಿತ್ತು. ಕ್ಯಾಂಪಸ್ ಒಣ ರಾಜಕೀಯದಿಂದ ಹಿಡಿದು, ವಿವಿಯ ಕುಲಪತಿವರೆಗಿನ ನಮ್ಮ ಮಾತುಗಳು ಇಂದಿಗೂ ಮಧುರ ಸುಮಧುರ.
ಇದೀಗ ಬೆಂದಕಾಳೂರಿನ ಹೆಬ್ಬಾಗಿಲಲ್ಲಿ ನಿಂತು ದಿನಗಳನ್ನು ಒಮ್ಮೆ ಹಾಗೇ ಮೆಲುಕು ಹಾಕಿದ್ರೆ. ಇಲ್ಲಿ ನಮ್ಮ ತನಕ್ಕೆ ಬೆಲೆ ಇಲ್ಲ.ಪಕ್ಕದಲ್ಲೇ ಹಾದು ಹೋದ್ರೂ ನಮ್ಮವರ ಬೆವರ ಕಮಟಿಲ್ಲ. ಇಲ್ಲೆಲ್ಲಾ ಸುಗಂಧ ಹೀರೋರೆ.
ನಿಜವೋ ಸುಳ್ಳೋ, ಇಂದಿನ ಕ್ಯಾಂಟೀನ್ ಪುರಾಣ ನಮ್ಮ ದಿನಗಳನ್ನು ನೆನಪಿಸಿ ಒಂದೊಮ್ಮೆ ಕಣ್ಣಂಚಲ್ಲಿ ನೀರಜಿನಿಗಿಸಿದ್ರೆ ಅದು ತಪ್ಪಲ್ಲ. ನಾವು ನಮ್ಮ ಕಾಲೇಜು ಅದೆಂಥ ಸವಿನೆನಪು.
ಇಂತಿ ನಿಮ್ಮ ಪ್ರೀತಿಯ
ಹಾಗೇ ಸುಮ್ಮನೆ.....
ಪ್ರತೀಕ್ ಕೊಟ್ರೇಶ್...........

No comments: